ಭಾಗೀರತಿಗೆ ಶತದಿನೋತ್ಸವದ ಸಂಭ್ರಮ
Posted date: 12 Wed, Sep 2012 ? 08:46:12 AM

ಹರ್ಷ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಬಿ.ಕೆ. ಶ್ರೀನಿವಾಸ್ ನಿರ್ಮಿಸಿರುವ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ  ‘ಭಾಗೀರತಿ’ ಈ ವಾರ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ‘ಭಾಗೀರತಿ’ ಎರಡು ಮೈಲಿಗಲ್ಲು ದಾಟಿದೆ. ಈ ವರ್ಷದ ಮೊದಲ ಶತದಿನೋತ್ಸವ ಚಿತ್ರ ‘ಭಾಗೀರತಿ’ ಎಂಬುದು ಮೊದಲ ಚಿತ್ರದ ಮೊದಲ ಹೆಗ್ಗಳಿಕೆ. ಇತ್ತೀಚಿನ ದಿನಗಳಲ್ಲಿ ಕಲಾತ್ಮಕ ಚಿತ್ರಗಳು ಬಿಡುಗಡೆಯಾಗುವುದೇ ಕಷ್ಟವಾಗಿರುವಾಗ, ‘ಭಾಗೀರತಿ’ ಬಿಡುಗಡೆಯಾಗಿದ್ದಷ್ಟೇ ಅಲ್ಲ, ಯಶಸ್ವಿಯಾಗಿ ನೂರು ದಿನ ಪೂರೈಸಿರುವುದು ಇನ್ನೊಂದು ಹೆಗ್ಗಳಿಕೆ. ಈ ಎರಡು ಪ್ರಮುಖ ಹೆಗ್ಗಳಿಕೆಗಳೊಂದಿಗೆ ‘ಭಾಗೀರತಿ’ ಈ ವಾರ ನೂರನೇ ದಿನ ಪೂರೈಸಲಿದೆ.

ಕನ್ನಡದ ಜನಪ್ರಿಯ ಕಾವ್ಯಕಥನವಾದ ‘ಕೆರೆಗೆ ಹಾರ’ವನ್ನು ಡಾ ಬರಗೂರು ರಾಮಚಂದ್ರಪ್ಪ ಹಲವು ದಿನಗಳಿಂದ ಚಿತ್ರ ಮಾಡಬೇಕೆಂಬ ಕನಸು ಕಂಡಿದ್ದು ಗೊತ್ತಿದ್ದ ವಿಚಾರವೇ. ಅದು ಈಡೇರಿದ್ದು ‘ಭಾಗೀರತಿ’ಯ ಮೂಲಕ. ಕನ್ನಡದ ಅಪ್ಪಟ ಪ್ರತಿಭಾವಂತ ಕಲಾವಿದರಾದ ಡಾ. ಶ್ರೀನಾಥ್, ಹೇಮಾ ಚೌಧರಿ, ಕಿಶೋರ್, ತಾರಾ, ಭಾವನಾ ಮುಂತಾದವರನ್ನು ಕಲೆ ಹಾಕಿಕೊಂಡು, ಖ್ಯಾತ ತಂತ್ರಜ್ಞರಾದ ಸಂಗೀತ ನಿರ್ದೇಶಕ ವಿ. ಮನೋಹರ್, ಸಂಕಲನಕಾರ ಸುರೇಶ್ ಅರಸ್ ಅವರನ್ನು ಜೊತೆಗೂಡಿಸಿಕೊಂಡು ಬರಗೂರರು ಚಿತ್ರ ಮಾಡುತ್ತಾರೆ ಎಂದು ಸುದ್ದಿಯಾದಾಗ, ಚಿತ್ರ ಆರಂಭದಲ್ಲೇ ಪ್ರೇಕ್ಷಕರ ನಡುವೆ ತೀವ್ರ ಕುತೂಹಲವನ್ನು ಹುಟ್ಟುಹಾಕಿತ್ತು. ಆ ಕುತೂಹಲವೇ ಚಿತ್ರ ಈ ವಾರ ನೂರು ದಿನ ಪೂರೈಸುತ್ತಿರುವುದಕ್ಕೆ ಕಾರಣ ಎಂದರೆ ತಪ್ಪಿಲ್ಲ.

‘ಭಾಗೀರತಿ’ಯ ಇನ್ನೊಂದು ವಿಶೇಷವೆಂದರೆ, ಚಿತ್ರವನ್ನು ಎಲ್ಲಾ ಸ್ಥರದ ಜನರು ಮೆಚ್ಚಿಕೊಂಡಿದ್ದು. ಸಾಮಾನ್ಯವಾಗಿ ಒಂದು ಚಿತ್ರ ಕ್ಲಾಸ್ ಅಥವಾ ಮಾಸ್ ಪ್ರೇಕ್ಷಕರಿಗೆ ಎಂದು ವರ್ಗೀಕರಣ ಮಾಡಲಾಗುತ್ತದೆ. ಆದರೆ, ಪ್ರೇಕ್ಷಕರು ಮತ್ತು ಮಾಧ್ಯಮದವರು ತುಂಬು ಹೃದಯದಿಂದ ಈ ಚಿತ್ರವನ್ನು ಕೊಂಡಾಡಿದರು. ಇನ್ನು ಪ್ರೇಕ್ಷಕರಲ್ಲೂ ಸಾಮಾನ್ಯ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಚಿತ್ರ ನೋಡಿ ಸಂತೋಷಪಟ್ಟರೆ, ಗಣ್ಯರು ವಿಶೇಷ ಪ್ರದರ್ಶನದಲ್ಲಿ ಚಿತ್ರವನ್ನು ನೋಡಿ ಕೊಂಡಾಡಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಪದ್ಮಶ್ರೀ ಗಿರೀಶ್ ಕಾಸರವಳ್ಳಿ, ಗೋಪಾಲಕೃಷ್ಣ ಪೈ, ಮನು ಚಕ್ರವರ್ತಿ, ಬಿ.ಟಿ. ಲಲಿತಾ ನಾಯಕ್, ಡಾ. ಭಾರತೀ ವಿಷ್ಣುವರ್ಧನ್, ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಟಿ.ಎನ್. ಸೀತಾರಾಂ, ಡಾ. ಕಮಲಾ ಹಂಪನಾ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಗೃಹ ಸಚಿವ ಆರ್. ಅಶೋಕ್ ಸೇರಿದಂತೆ ಹಲವು ಗಣ್ಯರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರೇಕ್ಷಕರು ಮತ್ತು ಗಣ್ಯರ ಶುಭಕಾಮನೆಗಳೊಂದಿಗೆ ಯಶಸ್ವಿ ಪ್ರದರ್ಶನಗಳನ್ನು ಕಂಡ ‘ಭಾಗೀರತಿ’ ಈಗ ನೂರರ ಗಡಿ ದಾಟುವುದುಕ್ಕೆ ಸಜ್ಜಾಗುತ್ತಿದೆ. ಈ ಯಶಸ್ಸು ಸದಭಿರುಚಿಯ ಚಿತ್ರಗಳನ್ನು ಜನ ಎಂದೂ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಜನರ ಈ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹದಿಂದ ಉತ್ತೇಜಿತರಾಗಿರುವ ನಿರ್ಮಾಪಕ ಬಿ.ಕೆ. ಶ್ರೀನಿವಾಸ್ ಮತ್ತು ನಿರ್ದೇಶಕ ಡಾ. ಬರಗೂರು ರಾಮಚಂದ್ರಪ್ಪನವರು ‘ಅಂಗುಲಿಮಾಲ’ ಎಂಬ ಮತ್ತೊಂದು ಸದಭಿರುಚಿಯ ಚಿತ್ರವನ್ನು ಜನರಿಗೆ ಅರ್ಪಿಸುವ ಸಿದ್ಧತೆ ನಡೆಸಿದ್ದಾರೆ. ಆ ಚಿತ್ರ ಅಕ್ಟೋಬರ್ ಮೊದಲ ವಾರದಿಂದ ಪ್ರಾರಂಭವಾಗಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed